ಅರ್ಜುನನ ಅಹಂಕಾರ ಶಮನಗೊಳಿಸಿದ ಕೃಷ್ಣ


ಅರ್ಜುನನ ಅಹಂಕಾರ ಶಮನಗೊಳಿಸಿದ ಕೃಷ್ಣ 


ಕುರುಕ್ಷೇತ್ರ ಯುದ್ಧದಲ್ಲಿ ಆವತ್ತು ಕರ್ಣಾರ್ಜುನರ ಮುಖಾ ಮುಖಿ. ಘನಘೋರ ಕಾಳಗ ಅದು. ಇಬ್ಬರೂ ಅಪ್ರತಿಮ ಯೋಧರು, ಬಿಟ್ಟ ಬಾಣಗಳಿಗೆ ಲೆಕ್ಕವೇ ಇಲ್ಲ. ಸ್ವರ್ಗದಿಂದ ದೇವತೆಗಳೂ ರಣಾಂಗಣದತ್ತ ಇಣುಕಿ ನೋಡಿ ಬೆಕ್ಕಸಬೆರಗಾಗಿದ್ದರು.

ಅರ್ಜುನನ ಗಾಂಡೀವದಿಂದ ಹೊರಟ ಒಂದೊಂದು ಬಾಣವೂ ಕರ್ಣನ ರಥವನ್ನು ಹತ್ತಿಪ್ಪತ್ತು ಅಡಿಗಳಷ್ಟಾದರೂ ಹಿಂದಕ್ಕೆ ತಳ್ಳುತ್ತಿತ್ತು. ಅರ್ಜುನನ ಪರಾಕ್ರಮವನ್ನು ಪಾಂಡವರ ಪಕ್ಷದವರೆಲ್ಲ ಕೊಂಡಾಡುತ್ತಿದ್ದರು. ಕರ್ಣನೇನು ಕಡಿಮೆಯೇ? ಅವನು ಅರ್ಜುನನತ್ತ ಬಾಣ ಬಿಟ್ಟಾಗ ಅರ್ಜುನನ ರಥವೂ ಅಲುಗಾಡುತ್ತಿತ್ತು, ನಾಲ್ಕೈದು ಅಡಿಗಳಷ್ಟಾದರೂ ಹಿಂದೆ ಸರಿಯುತ್ತಿತ್ತು. ಕರ್ಣನ ಪರಾಕ್ರಮಕ್ಕೂ ಭೇಷ್ ಎನ್ನುವವರು ಇದ್ದರೆನ್ನಿ, ಕೌರವರ ಪಾಳೆಯ ದೊಡ್ಡದಿತ್ತಲ್ಲ!

ಆಶ್ಚರ್ಯವೆಂದರೆ ಅರ್ಜುನನ ಸಾರಥಿ ಶ್ರೀಕೃಷ್ಣನೂ ಕರ್ಣನ ಬಾಣ ಅರ್ಜುನನ ರಥವನ್ನು ಅಲುಗಾಡಿಸಿದಾಗಲೆಲ್ಲ ‘ಭಲೇ ಕರ್ಣ!’ ಎಂದು ಮನಸಾರೆ ಕೊಂಡಾಡುವನು. ಪರಂತು ಅರ್ಜುನನ ಬಾಣ ಕರ್ಣನ ರಥವನ್ನು ಹಿಮ್ಮೆಟ್ಟಿದಾಗ ಶ್ರೀಕೃಷ್ಣ ಒಮ್ಮೆಯೂ ಅರ್ಜುನನಿಗೆ ಶಭಾಷ್ ಎಂದದ್ದಿಲ್ಲ. ಸೂರ್ಯಾಸ್ತವಾದಾಗ ಆ ದಿನದ ಯುದ್ಧ ಮುಗಿಯಿತು. ರಾತ್ರಿ ಹೊತ್ತು ಬಿಡಾರದಲ್ಲಿ ಅರ್ಜುನ ಶ್ರೀಕೃಷ್ಣನನ್ನು ಕೇಳಿಯೇಬಿಟ್ಟ- ‘ದೇವಾ, ನನ್ನ ಒಂದೊಂದು ಬಾಣವೂ ಕರ್ಣನ ರಥವನ್ನು ಧೂಳಿಪಟ ಮಾಡುತ್ತಿತ್ತು, ಆದರೆ ಒಮ್ಮೆಯೂ ನೀನು ನನಗೆ ಮೆಚ್ಚುಗೆಯ ಮಾತನ್ನಾಡಲಿಲ್ಲ.

ಅದೇ, ಕರ್ಣನ ಬಾಣ ನಮ್ಮ ರಥವನ್ನು ಸ್ವಲ್ಪೇಸ್ವಲ್ಪ ಅಲುಗಾಡಿಸಿದಾಗಲೂ ನೀನವನನ್ನು ಬಾಯ್ತುಂಬ ಹೊಗಳುತ್ತಿದ್ದೆ. ಏಕೆ?’ ಶ್ರೀಕೃಷ್ಣ ನಸುನಕ್ಕು ಹೇಳುತ್ತಾನೆ: ‘ಅರ್ಜುನ, ಇದನ್ನು ನೆನಪಿಸಿಕೊಳ್ಳು. ನಿನ್ನ ರಥದ ಧ್ವಜದಲ್ಲಿ ವೀರಾಂಜನೇಯನಿದ್ದಾನೆ ರಥವನ್ನು ರಕ್ಷಿಸಲಿಕ್ಕೆ. ರಥದ ಚಕ್ರಗಳಿಗೆ ಆಧಾರವಾಗಿ ಆದಿಶೇಷನಿದ್ದಾನೆ. ನಿನಗೆ ಸಾರಥಿಯಾಗಿಸ್ವತಃ ನಾನಿದ್ದೇನೆ. ಅಷ್ಟಾಗಿಯೂ ಕರ್ಣನ ಬಾಣಗಳು ನಮ್ಮ ರಥವನ್ನು ಅಲುಗಾಡಿಸುವುದರಲ್ಲಿ ಯಶಸ್ವಿಯಾಗುತ್ತಿದ್ದವು.

ಆದರೆ ಕರ್ಣನ ರಥಕ್ಕೆಲ್ಲಿತ್ತು ಅಂಥ ರಕ್ಷಣೆ? ಅವನಿಗೆ ಸರಿಯಾದ ಸಾರಥಿಯೂ ಇಲ್ಲ. ಪಾಪ ಎಲ್ಲವನ್ನೂ ತಾನೊಬ್ಬನೇ
ಕಷ್ಟಪಟ್ಟು ನಿಭಾಯಿಸುತ್ತಿದ್ದಾನೆ. ಆದರೂ ನೋಡು ಹೇಗೆ ವೀರಪರಾಕ್ರಮಿಯಾಗಿ ಕಾದಿದನು! ಅದಕ್ಕೇ ನಾನು ಭಲೇ ಕರ್ಣ ಎಂದು ಮನಃಪೂರ್ವಕ ಕೊಂಡಾಡಿದೆ. ‘ಕೃಷ್ಣನ ಮಾತಿಗೆ ಅರ್ಜುನ ಸುಮ್ಮನಾಗಬೇಕಾಯಿತು. ಕುರುಕ್ಷೇತ್ರ ಯುದ್ಧ ಕೊನೆ ಗೊಂಡ ಕ್ಷಣದಲ್ಲೂ ರಥದಿಂದ ಮೊದಲಿಗೆ ಕೃಷ್ಣ ಕೆಳಗಿಳಿಯಲಿಲ್ಲ. ಅರ್ಜುನ ಕೆಳಗಿಳಿದ ಮೇಲಷ್ಟೇ ಕೃಷ್ಣನೂ ಇಳಿದ. ತತ್‌ಕ್ಷಣವೇ ರಥಕ್ಕೆ ಬೆಂಕಿ ಹೊತ್ತಿಕೊಂಡು ಭಸ್ಮವಾಗಿ ಹೋಯ್ತಂತೆ.

ಆಗಲೂ ಶ್ರೀಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ: ‘ಪಾರ್ಥ, ನಿಜಕ್ಕಾದರೆ ನಿನ್ನ ರಥವನ್ನು ಕರ್ಣನ ಬಾಣಗಳು ಆಗಲೇ ನಾಶ ಮಾಡಿ ಆಗಿತ್ತು. ನಾನಿದ್ದುದರಿಂದ ರಕ್ಷಿಸಿಕೊಂಡು ಮುನ್ನಡೆಸಿದೆ ಅಷ್ಟೇ. ನೀನೇ ಮಹಾಪರಾಕ್ರಮಿ ಎಂದು ಯಾವತ್ತೂ ಕೊಚ್ಚಿ ಕೊಳ್ಳಬೇಡ. ನೀನು ಏನೇ ಸಾಧನೆ ಮಾಡಿದ್ದಿಯಾದರೂ ಅದು ದೈವಬಲದಿಂದಲೇ. ಅನವರತವೂ ನಿನ್ನ ರಕ್ಷಣೆಯಾಗಿರುವುದು, ನಿನ್ನ ವಿಜಯದ ಹಾದಿಯಲ್ಲಿ ಅಡೆತಡೆಗಳು ನಿವಾರಣೆಯಾಗಿರುವುದು, ಸರಿಯಾದ ಸಮಯಕ್ಕೆ ಸರಿಯಾದ ಅವಕಾಶಗಳು ಬಂದೊದಗಿರುವುದು…ಎಲ್ಲವೂ ದೈವಸಂಕಲ್ಪದಿಂದಲೇ ಹೊರತು ಬರೀ ನಿನ್ನಿಂದಲೇ ಅಂತ ತಿಳಿದುಕೊಳ್ಳಬೇಡ.

ನಿನ್ನ ಯಶಸ್ಸಿನಲ್ಲಿ ನಿನ್ನ ಪ್ರಯತ್ನದ ಪಾಲಿದೆ ನಿಜ, ಆದರೆ ಅದೊಂದೇ ಅಲ್ಲ. ಬೇರೆ ಹಲವಾರು ಪೂರಕ ಅಂಶಗಳು ಇವೆ. ಅವುಗಳ ಬಗ್ಗೆಯೂ ಕೃತಜ್ಞತಾಭಾವ ನಿನ್ನಲ್ಲಿರಬೇಕು.’ ಅರ್ಜುನನಿಗೆ ಹೇಳಿದ ಮಾತು ನಮಗೆಲ್ಲರಿಗೂ ನಾಟಬೇಕಾದ್ದೇ ಅಲ್ಲವೇ? ಸಮಸ್ಯೆ ಎಲ್ಲಿ ಶುರುವಾಗುವುದೆಂದರೆ ನಾವು ನಮ್ಮ ಪರಾಕ್ರಮಗಳನ್ನು ಬೇಕಿದ್ದರೆ ಇದ್ದದ್ದು ಹತ್ತು ಪಟ್ಟು ಮಾಡಿ ಕೊಚ್ಚಿಕೊಳ್ಳು ತ್ತೇವೆಯೇ ವಿನಾ ಬೇರೆಯವರ ಸಾಧನೆಯನ್ನು, ಸದ್ಗುಣಗಳನ್ನು ಕೊಂಡಾಡುವುದಕ್ಕೆ ನಮಗೆ ಮನಸ್ಸು ಬರುವುದಿಲ್ಲ.

ಅರ್ಜುನನ ಅಹಂಕಾರ ಶಮನಗೊಳಿಸಿದ ಕೃಷ್ಣ ಅರ್ಜುನನ ಅಹಂಕಾರ ಶಮನಗೊಳಿಸಿದ ಕೃಷ್ಣ Reviewed by Super_Maa on October 07, 2022 Rating: 5

No comments:

Powered by Blogger.