ವಿವೇಕಾನಂದರ ಸಂನ್ಯಾಸಿ ಗೀತೆ - Sanyasi Geete Kannada

ವಿವೇಕಾನಂದರ ಸಂನ್ಯಾಸಿ ಗೀತೆ - Sanyasi Geete Kannada



Yelu melelu sadhuve haadu chaagiya haadanu
ಮೂಲ ಗೀತೆ : ಸ್ವಾಮಿ ವಿವೇಕಾನಂದ
ಕನ್ನಡಕ್ಕೆ ಅನುವಾದ: ರಾಷ್ಟ್ರಕವಿ ಕುವೆಂಪು

ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು;
ಹಾಡಿನಿಂದೆಚ್ಚರಿಸು  ಮಲಗಿಹ ನಮ್ಮ ಈ ತಾಯ್ನಾಡನು!

ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೊ,
ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ ,
ಎಲ್ಲಿ ಕಾಮವು ಸುಳಿಯದೊ – ಮೇಣ್
ಎಲ್ಲಿ ಜೀವವು ತಿಳಿಯದೊ
ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ,
ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ,
ನನ್ನಿವರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೊ,
ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ
ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ- ಓಂ! ತತ್! ಸತ್! ಓಂ!


ಕುಟ್ಟಿ ಪುಡಿ ಪುಡಿ ಮಾಡು ಮಾಯೆಯು ಕಟ್ಟಿಬಿಗಿದಿಹ ಹಗ್ಗವ;
ಕಿತ್ತು ಬಿಸುಡೈ ಹೊಳೆವ ಹೊನ್ನಿನ ಹೆಣ್ಣು ಮಣ್ಣಿನ ಕಗ್ಗವ!
ಮುದ್ದಿಸಲಿ  ಪೀಡಿಸಲಿ ದಾಸನು ದಾಸನೆಂಬುದೆ ಸತ್ಯವು;
ಕಬ್ಬಿಣವೋ? ಕಾಂಚನವೊ? ಕಟ್ಟಿದ ಕಣ್ಣಿ ಕಣ್ಣಿಯೆ ನಿತ್ಯವು.
ಪಾಪಪುಣ್ಯಗಳೆಂಬವು,  ಮಾತ್ಸರ್ಯ ಪ್ರೇಮಗಳೆಂಬವು
ದ್ವಂದ್ವ  ರಾಜ್ಯದ ಧೂರ್ಥಚೋರರು! ಬಿಟ್ಟು ಕಳೆ, ಕಳೆಯವರನು!
ಮೋಹಗೊಳಿಪರು, ಬಿಗಿವರಿರಿವರು; ಎಚ್ಚರಿಕೆಯಿಂದವರನು
ತಳ್ಳು ದೂರಕೆ ಓ ವಿರಕ್ತನೆ! ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಹಾಡು ಮುಕ್ತಿಯ  ಗಾನವನು, ಓ ವೀರ ಸಂನ್ಯಾಸಿ-
ಓಂ! ತತ್! ಸತ್! ಓಂ!


ಕತ್ತಲಳಿಯಲಿ; ಮಬ್ಬುಕವಿಸುವ ಭವದ ತೃಷ್ಣೆಯು ಬತ್ತಲಿ;
ಬಾಳ ಮೋಹವು ಮರುಮರೀಚಿಕೆ; ಮಾಯೆಕೆತ್ತಿದ ಪುತ್ತಳಿ;
ಜನನದೆಡೆಯಿಂ  ಮರಣದೆಡೆಗಾಗೆಳೆವುದೆಮ್ಮನು ದೇಹವು!
ಜನ್ಮ ಜನ್ಮದಿ ಮರಳಿ ಮರಳುವುದೆಮ್ಮ ಬಿಗಿಯಲು ಮೋಹವು!
ತನ್ನ ಜಯಿಸಿದ ಶಕ್ತನು – ಅವನೆಲ್ಲ  ಜಯಿಸಿದ ಮುಕ್ತನು!
ಎಂಬುದನು ತಿಳಿ; ಹಿಂಜರಿಯದಿರು. ಸನ್ಯಾಸಿಯೇ, ನಡೆಮುಂದಕೆ.
ಗುರಿಯು  ದೊರಕುವವರೆಗೆ  ನಡೆ, ನಡೆ; ನೋಡದಿರು ನೀ  ಹಿಂದಕೆ.
ಏಳು ಮೇಲೇಳೇಳು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು  ಮಲಗಿಹ ನಮ್ಮ ಈ ತಾಯ್ನಾಡನು
ಹಾಡು ಸಿದ್ದನೆ, ಓ  ಪ್ರಬುದ್ಧನೆ , ಹಾಡು ಸಂನ್ಯಾಸಿ-
ಓಂ! ತತ್! ಸತ್! ಓಂ!


“ಬೆಳೆಯ ಕೊಯ್ವನು  ಬಿತ್ತಿದಾತನು; ಪಾಪ ಪಾಪಕೆ ಕಾರಣ;

ವೃಕ್ಷಕಾರ್ಯಕೆ  ಬೀಜಕಾರಣ; ಪುಣ್ಯ, ಪುಣ್ಯಕೆ ಕಾರಣ;
ಹುಟ್ಟಿ  ಮೈವಡೆದಾತ್ಮ ಬಾಳಿನ ಬಲೆಯ ತಪ್ಪದೆ ಹೊರುವುದು;
ಕಟ್ಟು  ಮೀರಿಹನಾವನಿರುವನು? ಕಟ್ಟು  ಕಟ್ಟನೆ ಹೆರುವುದು!”
ಎಂದು ಪಂಡಿತರೆಂಬರು-ಮೇಣ್ ತತ್ವದರ್ಶಿಗಳೆಂಬರು!
ಆದೊಡೇನಂತಾತ್ಮವೆಂಬುದು ನಾಮರೂಪತೀತವು;
ಮುಕ್ತಿಬಂಧಗಳಿಲ್ಲದಾತ್ಮವು ಸರ್ವನಿಯಮಾತೀತವು!
ತತ್ವಮಸಿಯೆಂದರಿತು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಸಾರು ಸಿದ್ಧನೆ, ವಿಶ್ವವರಿಯಲಿ! ಹಾಡು ಸಂನ್ಯಾಸಿ
ಓಂ! ತತ್! ಸತ್! ಓಂ!


ತಂದೆ ತಾಯಿಯು ಸತಿಯು ಮಕ್ಕಳು ಗೆಳೆಯರೆಂಬುವರರಿಯರು
ಕನಸು ಕಾಣುತಲವರು ಸೊನ್ನೆಯ ಸರ್ವವೆನ್ನುತ ಮೆರೆವರು.
ಲಿಂಗವರಿಯದ ಅತ್ಮವಾರಿಗೆ ಮಗುವು? ಆರಿಗೆ ತಾತನು?
ಆರ ಮಿತ್ರನು ? ಆರ ಶತ್ರುವು? ಒಂದೆಯಾಗಿರುವಾತನು!
ಆತ್ಮವೆಲ್ಲಿಯು  ಇರುವುದು;- ಮೇಣ್ ಆತ್ಮವೊಂದಾಗಿರುವುದು.
ಭೇದವೆಂಬುವ ತೋರಿಕೆಯು  ನಮ್ಮಾತ್ಮನಾಶಕೆ  ಹೇತುವು.
ಭೇದವನು ತೊರೆದೊಂದೆಯೆಂಬುದನರಿಯೆ ಮುಕ್ತಿಗೆ ಸೇತುವು.
ಧೈರ್ಯದಿಂದಿದನೆಲ್ಲರಾಲಿಸೆ ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಸಾರು, ಜೀವನ್ಮುಕ್ತ! ಸಾರೈ ಧೀರ ಸಂನ್ಯಾಸಿ-
ಓಂ! ತತ್! ಸತ್! ಓಂ!


ಇರುವುದೊಂದೇ! ನಿತ್ಯಮುಕ್ತನು, ಸರ್ವಜ್ಞಾನಿಯು ಆತ್ಮನು
ನಾಮರೂಪತೀತನಾತನು; ಪಾಪಪುಣ್ಯಾತೀತನು!
ವಿಶ್ವಮಾಯಾಧೀಶನಾತನು; ಕನಸು ಕಾಣುವನಾತನು!
ಸಾಕ್ಷಿಯಾತನು; ಪ್ರಕೃತಿಜೀವನ ತೆರದಿ ತೋರುವನಾತನು!
ಎಲ್ಲಿ ಮುಕ್ತಿಯ ಹುಡುಕುವೆ?– ಏಕಿಂತು ಸುಮ್ಮನೆ ದುಡುಕುವೆ?
ಇಹವು ತೋರದು, ಪರವು ತೋರದು; ಗುಡಿಯೊಳದು ಮೈದೋರದು.
ವೇದ ತೋರದು, ಶಾಸ್ತ್ರ ತೋರದು;ಮತವು ಮುಕ್ತಿಯ ತೋರದು!
ನಿನ್ನ ಕೈಲಿದೆ ನಿನ್ನ ಬಿಗಿದಿಹ ಕಬ್ಬಿಣದ ಯಮಪಾಶವು;
ಬರಿದೆ ಶೋಕಿಪುದೇಕೆ? ಬಿಡು, ಬಿಡು!
ನಿನಗೆ ನೀನೇ ಮೋಸವು!
ಬೇಡ, ಪಾಶವ ಕಡಿದು ಕೈಬಿಡು! ಹಾಡು ಸಂನ್ಯಾಸಿ-
ಓಂ! ತತ್! ಸತ್! ಓಂ!


‘ಶಾಂತಿ ಸರ್ವರಿಗಿರಲಿ’ ಉಲಿಯೈ, ‘ಜೀವಜಂತುಗಳಾಳಿಗೆ
ಹಿಂಸೆಯಾಗದೆ ಇರಲಿ ಎನ್ನಿಂದೆಲ್ಲ ಸೊಗದಲಿ ಬಾಳುಗೆ!
ಬಾನೊಳಾಡುವ ನೆಲದೊಳೋಡುವ ಸರ್ವರಾತ್ಮನು ನಾನಹೆ;
ನಾಕನರಕಗಳಾಸೆಭಯಗಳನೆಲ್ಲ ಮನದಿಂದ ದೂಡುವೆ!’
ದೇಹ ಬಾಳಲಿ, ಬೀಳಲಿ;-ಅದು ಕರ್ಮನದಿಯಲಿ ತೇಲಲಿ!
ಕೆಲರು ಹಾರಗಳಿಂದ ಸಿಂಗರಿಸದನು ಪೂಜಿಸಿ ಬಾಗಲಿ!
ಕೆಲರು ಕಾಲಿಂದೊದೆದು ನೂಕಲಿ! ಹುಡಿಯು ಹುಡಿಯೊಳೆ ಹೋಗಲಿ!
ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು?
ನಿಂದೆ ನಿಂದಿಪರೆಲ್ಲ ಕೂಡಲು ಯಾರು ನಿಂದೆಯನುಂಬರು?
ಪಾಶಗಳ ಕಡಿ! ಬಿಸುಡು, ಕಿತ್ತಡಿ! ಹಾಡು ಸಂನ್ಯಾಸಿ-
 ಓಂ! ತತ್! ಸತ್! ಓಂ!
                                       
 ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವುದೊ,
ಸತ್ಯವೆಂಬುವುದಲ್ಲಿ ಸುಳಿಯದು! ಎಲ್ಲಿ ಕಾಮವು ಇರುವುದೊ,
ಅಲ್ಲಿ ಮುಕ್ತಿಯು ನಾಚಿ ತೋರದು! ಎಲ್ಲಿ ಸುಳಿವುದೊ ಭೋಗವು
ಅಲ್ಲಿ ತೆರೆಯದು ಮಾಯೆ ಬಾಗಿಲಿನಲ್ಲಿಹುದು ಭವರೋಗವು;
ಎಲ್ಲಿ ನೆಲೆಸದೋ ಚಾಗವೊ,-ದಿಟವಲ್ಲಿ ಸೇರದೊ ಯೋಗವು!
ಗಗನವೇ ಮನೆ! ಹಸುರೇ ಹಾಸಿಗೆ! ಮನೆಯು ಸಾಲ್ವುದೆ ಚಾಗಿಗೆ?
ಹಸಿಯೋ, ಬಸಿಯೋ? ಬಿದಿಯು  ಕೊಟ್ಟಾಹಾರವನ್ನವು ಯೋಗಿಗೆ!
ಏನು ತಿಂದರೆ, ಏನು ಕುಡಿದರೆ, ಏನು? ಆತ್ಮಗೆ ಕೊರತೆಯೆ?
ಸರ್ವಪಾಪವ ತಿಂದುತೇಗುವ ಗಂಗೆಗೇಂ ಕೊಳೆ ಕೊರತೆಯೆ?
ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸನ್ಯಾಸಿ-
 ಓಂ! ತತ್! ಸತ್! ಓಂ!
                                      
ನಿಜವನರಿತವರೆಲ್ಲೊ ಕೆಲವರು; ನಗುವರುಳಿದವರೆಲ್ಲರೂ
ನಿನ್ನ ಕಂಡರೆ, ಹೇ ಮಹಾತ್ಮನೆ! ಕುರುಡರೇನನು ಬಲ್ಲರು?
ಗಣಿಸದವರನು ಹೋಗು, ಮುಕ್ತನೆ, ನೀನು ಊರಿಂದೂರಿಗೆ
ಸೊಗವ ಬಯಸದೆ, ಅಳಲಿಗಳುಕದೆ! ಕತ್ತಲಲಿ ಸಂಚಾರಿಗೆ
ನಿನ್ನ ಬೆಳಕನು ನೀಡೆಲೈ;- ಸಂಸಾರ ಮಾಯೆಯ ದೂಡೆಲೈ!
ಇಂತು ದಿನದಿನ ಕರ್ಮಶಕ್ತಿಯು ಮುಗಿವವರೆಗೂ ಸಾಗೆಲೈ!
ನಾನು ನೀನುಗಳಳಿದು ಆತ್ಮದೊಳಿಳಿದು ಕಡೆಯೊಳು ಹೋಗೆಲೈ!
ಏಳು ಮೇಲೇಳೇಳು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ತತ್ವಮಸಿ ಎಂದರಿತು ಹಾಡೈ, ಧೀರ ಸನ್ಯಾಸಿ-
ಓಂ! ತತ್! ಸತ್! ಓಂ!

Share the song with your friends 

Please comment for Spelling corrections 
Also request your need in comment 

Thank You for visiting

Jai Hind
ವಿವೇಕಾನಂದರ ಸಂನ್ಯಾಸಿ ಗೀತೆ - Sanyasi Geete Kannada ವಿವೇಕಾನಂದರ ಸಂನ್ಯಾಸಿ ಗೀತೆ - Sanyasi Geete Kannada Reviewed by Super_Maa on August 12, 2022 Rating: 5

No comments:

Powered by Blogger.